 ಕಲ್ಲಪ್ಪ ಗಿರಿಯಪ್ಪ ಕುಂದಣಗಾರ :-
1895-1965. ಕನ್ನಡ ಸಾಹಿತ್ಯ ಸಂಸ್ಕøತಿ, ನಾಡುನುಡಿಗೆ ಅಪ್ರತಿಮೆ ಸೇವೆ ಸಲ್ಲಿಸಿದ ವಿದ್ವಾಂಸರು. ಬೆಳಗಾಂವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೌಜಲಗಿಯಲ್ಲಿ ಜನಿಸಿದರು. ಇವರದು ಅಕ್ಕಸಾಲಿಗ ಮನೆತನ. ಇದ್ದದ್ದು ಸಣ್ಣಗ್ರಾಮವಾದ್ದರಿಂದ ಚಿನ್ನದ ಕೆಲಸ ಮಾಡಿಸುವವರು ಬಹಳ ಮಂದಿ ಇರುತ್ತಿರಲಿಲ್ಲ. ಇಂಥ ಬಡಕುಟುಂಬದಲ್ಲಿ ಜನಿಸಿದ ಕುಂದಣಗಾರರು ಚಿಕ್ಕಂದಿನಲ್ಲೇ ಸ್ವಾವಲಂಬಿಯಾಗಿ ಬಾಳಬೇಕಾಯಿತು. ಪ್ರಾಥಮಿಕ ಶಿಕ್ಷಣ ಕೌಜಲಗಿಯಲ್ಲಿ ನಡೆದು ಬೆಳಗಾಂವಿಯ ಸರದಾರ್ ಹೈಸ್ಕೂಲಿಗೆ ಸೇರಿದರು. ಅಲ್ಲಿ ಒಬ್ಬ ಸರಾಫನ ಲೆಕ್ಕ ಬರೆದು ಬಂದ ಹಣದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಅನಂತರ ಧಾರವಾಡದ ವಿಕ್ಟೋರಿಯ ಹೈಸ್ಕೂಲಿನಲ್ಲಿ ಮೆಟ್ರಿಕ್ ಪಾಸು ಮಾಡಿದರು. ಜೀವನದ ದುರ್ಭರ ಸನ್ನಿವೇಶಗಳಿಗೆ ಸಿಲುಕಿದರಾಗಿ ಪದವಿಯನ್ನು ಪಡೆಯಲು ಹತ್ತು ವರ್ಷ ಬೇಕಾಯಿತು. ಮಧ್ಯೆ ಮಧ್ಯೆ, ಬಿಟ್ಟು ಬಿಟ್ಟು ಕಾಲೇಜು ಸೇರಿ ಪದವಿ ಪಡೆದರು. ಕೊಲ್ಲಾಪುರದ ರಾಜಾರಾಮ್ ಹೈಸ್ಕೂಲ್ ಮತ್ತು ಗೋಕಾರದ ಎ.ವಿ. ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ನಿಂತರು. ಅನಂತರ ಕನ್ನಡ ಎಂ. ಎ. ಪರೀಕ್ಷೆಗೆ ಕೂರಲು ನಿರ್ಧರಿಸಿ ಹಳಗನ್ನಡ ಕಾವ್ಯಗಳ ವ್ಯಾಸಂಗ ಹಾಗೂ ಸಂಸ್ಕøತ ಭಾಷೆಗಳ ಅಭ್ಯಾಸಕ್ಕೆ ತೊಡಗಿದರು. ಬಿಡುವಿನ ವೇಳೆಯಲ್ಲಿ ತಾಮ್ರ ಶಾಸನ, ಶಿಲಾಶಾಸನಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದರು. ಈ ಮಧ್ಯೆ ಗುಡಿ-ಗೋಪುರ, ಪ್ರಾಚೀನ ಅವಶೇಷಗಳ ಕಡೆಗೆ ಅಸಕ್ತಿ ಬೆಳೆಸಿಕೊಂಡರು. ತಮ್ಮ 31ನೆಯ ವಯಸ್ಸಿನಲ್ಲಿ ಎಂ ಎ. (1925) ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಳಿಕ ಎರಡು ವರ್ಷ (1925-27) ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾದರು. ಅನಂತರ ಧಾರವಾಡವನ್ನು ಬಿಟ್ಟು ಕೊಲ್ಲಾಪುರದ ರಾಜಾರಾಮ್ ಕಾಲೇಜನ್ನು ಸೇರಿದರು. 1927 ರಿಂದ 1948ರ ವರೆಗೂ ರಾಜಾರಾಮ್ ಕಾಲೇಜಿನಲ್ಲಿ ಕನ್ನಡದ ಪ್ರಾಧ್ಯಾಪಕರಾಗಿ ಉಳಿದು ಕನ್ನಡ ಸರಸ್ವತಿಯ ಸೇವೆ ಮಾಡಿದರು. 1930ರಲ್ಲಿ ಅವರ ಪ್ರಥಮ ಕೃತಿ ಸರಸ್ವತಿ ಎಂಬ ಕಾದಂಬರಿ ಪ್ರಕಟವಾಯಿತು. 1957ರಲ್ಲಿ ಪ್ರಕಟವಾದ ಪಂಪನ ಆದಿಪುರಾಣದ ಎರಡನೆಯ ಆವೃತ್ತಿಯಲ್ಲಿ ಅವರ ಗ್ರಂಥ ಸಂಸ್ಕರಣ ಪಾಂಡಿತ್ಯ, ಪರಿಶ್ರಮ ಪಡಿಮೂಡಿ ಬಂದಿದೆ. ಅವರ ಹರಿಹರ ದೇವ ಎಂಬುದು ಕನ್ನಡ ಕವಿಪ್ರಶಸ್ತಿ ಗ್ರಂಥದಲ್ಲಿ ಗಣ್ಯವಾದುದು. ಮಹಾಲಕ್ಷ್ಮಿ ದೇವಾಲಯದ ಮೇಲೆ ಅವರು ಬರೆದ ಇಂಗ್ಲಿಷ್ ಪುಸ್ತಕ ಪ್ರಮಾಣಭೂತವಾಗಿದೆ. ಕೊಲ್ಲಾಪುರದ ಬ್ರಹ್ಮಪುರಿಯಲ್ಲಿ ಅವರು ನಡೆಯಿಸಿದ ಉತ್ಖನನ ಐತಿಹಾಸಿಕ ದೃಷ್ಟಿಯಿಂದ ಮಹತ್ತ್ವಪೂರ್ಣದ್ದಾಗಿದೆ. ಅಲ್ಲಿ ದೊರೆತ ಅವಶೇಷಗಳು ಸಾತವಾಹನ ಕಾಲದ ವ್ಯಾಪಾರದ ಸಂಬಂಧವನ್ನು ಸೂಚಿಸುತ್ತವೆ.

 ಕುಂದಣಗಾರರದು ಸಾಮಾನ್ಯ ಎತ್ತರದ ಸಾಧಾರಣ ಮೈಕಟ್ಟು. ಬಣ್ಣ ಸಾದುಗಪ್ಪು. ಮಂದಹಾಸ, ಮೃದುವಚನ, ಸದ್ವಿನಯ, ಗಾಂಭೀರ್ಯಗಳನ್ನುಳ್ಳ ಅಪೂರ್ವ ವ್ಯಕ್ತಿತ್ವವವರದು. ವಿಶ್ವಾಸನೀಯ ಮಿತ್ರರಾಗಿದ್ದರಲ್ಲದೆ ಅವರು ಅಭ್ಯಾಸದಲ್ಲಿ ಸಹಕಾರಿಗಳಾಗಿದ್ದರು. ಅರ್ಧ ಶತಮಾನಕ್ಕೂ ಮಿಕ್ಕಿ ನಿರಪೇಕ್ಷ ಭಾವನೆಯಿಂದ ಕನ್ನಡಕ್ಕೆ ದುಡಿದ ಅಪೂರ್ವ ವ್ಯಕ್ತಿಗಳವರು. ರಗಳೆ ಷಟ್ಟದಿ, ವಚನ ಸಾಹಿತ್ಯ, ವ್ಯಾಕರಣ, ಛಂದಸ್ಸು, ಧರ್ಮ, ಕಲೆ ಹೀಗೆ ಎಲ್ಲ ಭಾಗಗಳಲ್ಲೂ ಅವರ ಲೇಖಣಿ ಹರಿದಿದೆ. ಕುಂದಣಗಾರರ ಬೆಲೆಯುಳ್ಳ ಲೇಖನಗಳು ಸಂಶೋಧಕರಿಗೆ ಸ್ಛೂರ್ತಿಯನ್ನು ನೀಡಿವೆ. ಪಂಪನ ಕಾಲದ ಆಭರಣಗಳು, ಚಾಳುಕ್ಯರ ಪೂರ್ವದ ಕತೆಗಳು ಮೊದಲಾದ ಲೇಖನಗಳು ಅವರ ಸಂಶೋಧನ, ವಿಮರ್ಶನ ಪರಿಶ್ರಮಗಳನ್ನು ಸೂಚಿಸುತ್ತದೆ. ಕುಂದಣಗಾರರು ಸ್ವಭಾವತಃ ಅಧ್ಯಾಪಕರು, ಅಚಾರ್ಯರು. ಅವರ ಶಿಷ್ಯಕೋಟಿ ಅಪಾರ. ಉತ್ತರ ಕರ್ಣಾಟಕದ ಶಾಲಾಕಾಲೇಜುಗಳಲ್ಲಿ ಕನ್ನಡದ ಸೇವೆ ಮಾಡುತ್ತಿರುವ ಶಿಕ್ಷಕರು. ಪ್ರಾಧ್ಯಾಪಕರು ಒಂದಿಲ್ಲೊಂದು ದೃಷ್ಟಿಯಲ್ಲಿ ಕುಂದಣಗಾರರ ಶಿಷ್ಯವರ್ಗಕ್ಕೆ ಸೇರಿದವರು. ವಿದ್ಯಾರ್ಥಿಗಳು ಅವರಿಗೆ ಮನೆ ಮಕ್ಕಳಂತೆ. ಕುಂದಣಗಾರರು ಕೊಲ್ಲಾಪುರದಲ್ಲಿ ಕನ್ನಡಕ್ಕೆ ಬೆನ್ನಲುಬಾಗಿ ನಿಂತರು. ಅಲ್ಲದೆ ಅಲ್ಲಿನ ಸಾಮಾಜಿಕರಲ್ಲೂ ಕನ್ನಡದ ದೀವಿಗೆಯನ್ನು ಹತ್ತಿಸಿ ಬೆಳಗಿಸಿದರು. ಬೊಂಬಾಯಿ, ಕರ್ನಾಟಕ, ಮೈಸೂರು ವಿಶ್ವವಿದ್ಯಾನಿಲಯಗಳೊಡನೆ ಅನೇಕ ರೀತಿಯ ಸಂಬಂಧವನ್ನಿಟ್ಟುಕೊಂಡಿದ್ದರು. ಬೊಂಬಾಯಿ ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡದ ಹಿರಿಯ ನೇತಾರರಾಗಿ ಅವರು ಕೆಲಸ ಮಾಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ರೂಪಿತವಾಗುವಾಗ ವಿಶೇಷ ಅಸ್ಥೆ ವಹಿಸಿದ ಮಹನೀಯರಲ್ಲಿ ಅವರೂ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟುವಿನ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಪರಿಷತ್ತಿನ ಕನ್ನಡ-ಕನ್ನಡ ನಿಘಂಟು ಅವರ ವಿದ್ವತ್ತಿನ ಲಾಭ ಪಡೆದಿದೆ. 1962ರಲ್ಲಿ ಗದಗಿನಲ್ಲಿ ನಡೆದ 43ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚುನಾಯಿಸಿ ಕನ್ನಡ ಜನ ಅವರನ್ನು ಗೌರವಿಸಿದರು. ವಿದ್ಯಾವಿನಯ ಸಂಪನ್ನರಾದ ಕುಂದಣಗಾರರು 1948 ರಿಂದ ತಮ್ಮ ಕೊನೆಯ ದಿನಗಳವರೆಗೂ ಬೆಳಗಾಂವಿಯ ರಾಣಿ ಪಾರ್ವತಿದೇವಿ ಕಾಲೇಜಿನಲ್ಲಿ ಗೌರವ ಪ್ರಾಧ್ಯಾಪಕರಾಗಿದ್ದರು.

 ಸಾಹಿತ್ಯ ಕೃತಿಗಳು: ಸರಸ್ವತಿ (1930) ಕಾದಂಬರಿ. ಮಹಾದೇವಿಯಕ್ಕ (1930). ಹರಿಹರದೇವ ಪ್ರಶಸ್ತಿ (1937) ವಿಮರ್ಶಾಗ್ರಂಥಗಳು. ಲೀಲಾವತಿ ಪ್ರಬಂಧ (1937). ಪೂರ್ವಪುರಾಣ (1943), ಅದಿಪುರಾಣ (1953), ಕುಮುದೇಂದು ರಾಮಯಣ-ಇವು ಸಂಪಾದಿತ ಕೃತಿಗಳು. ಶ್ರೀಯುತರಿಗೆ ಸಮರ್ಪಿಸಿದ ಕುಂದಣ ಗ್ರಂಥದಲ್ಲಿ ಇವರ ಬಿಡಿ ಹಾಗೂ ಸಂಶೋಧನ ಲೇಖನಗಳಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ